Thursday, December 2, 2010

cortasy prajavani..ಕತ್ತಲೆಯಲ್ಲಿ ಬೆಳಕನ್ನು ಹುಡುಕುತ್ತಾ

ಕತ್ತಲೆಯಲ್ಲಿ ಬೆಳಕನ್ನು ಹುಡುಕುತ್ತಾ!
ಅನೀಲ ಕಾಜಗಾರ
ಅನೇಕ ಅಡೆತಡೆಗಳು ಇದ್ದರೂ ವಿದ್ಯೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಯೊಬ್ಬನ ಕಥೆ ಇಲ್ಲಿದೆ.ಈ ವಿದ್ಯಾರ್ಥಿಯ ಹಿನ್ನೆಲೆ ಕೇಳಿದರೇ ಬೆರಗಾಗುವಂಥದ್ದು.
ಇವನ ಹೆಸರು ಮಲ್ಲಪ್ಪ ನಿಂ. ಬಂಡಿ. ಈತ ಈಗ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಎಂ.ಎ ಓದುತ್ತಿದ್ದಾನೆ.ತನ್ನ ಬಿ.ಎ ಪದವಿಯಲ್ಲಿ ಕವಿವಿಗೆ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದ ಹುಡುಗನೀತ. ಇದರಲ್ಲಿ ಏನು ವಿಶೇಷ ಇದೆ ಅಂತೀರಾ! ಸ್ನೇಹಿತರೆ ಎಲ್ಲರಂತೆ ಇವನಲ್ಲ. ಏಕೆಂದರೆ ನಮಗೆ ಇರುವಂತೆ ಇವನಿಗೆ ಕಣ್ಣು ಇಲ್ಲ. ಈತ ಅಂಧ ವಿದ್ಯಾರ್ಥಿ.ಇವನ ಜೀವನದ ಸುತ್ತಲೂ ಕತ್ತಲಗೋಡೆ ಆವರಿಸಿದ್ದರೆ, ಅದೇ ಕತ್ತಲಲ್ಲಿ ಬೆಳಕನ್ನ ಹುಡುಕುವ ಮನೋಭಾವವನ್ನು ಈ ಮಲ್ಲಪ್ಪ ಹೊಂದಿದ್ದಾರೆ. ಹೀಗಾಗಿಯೇ ಅಂಧತ್ವ ಆತನ ಶಿಕ್ಷಣಕ್ಕೆ ಯಾವ  ಅಡ್ಡಿಯೊಡ್ಡಲಿಲ್ಲ.

ಬಾಗಲಕೋಟೆ ಜಿಲ್ಲೆಯ ಬಿಳಗಿ ತಾಲೂಕಿನ ಹೆರಕಲ್ ಎಂಬ ಚಿಕ್ಕ ಗ್ರಾಮದ ಬಡಕುಟುಂಬದಲ್ಲಿ ಜನಿಸಿದ ಈತ ತನ್ನ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಅಂಧ ಮಕ್ಕಳ ಶಾಲೆ ಹುಬ್ಬಳ್ಳಿಯಲ್ಲಿ ಮುಗಿಸಿದ. ತಮ್ಮ ಬ್ರೇಲ್ ಲಿಪಿಯಿಂದ ಹತ್ತನೆ ತರಗತಿಯಲ್ಲಿ ಈತ 90.24% ಅಂಕ ಪಡೆಯುವುದರ ಮೂಲಕ ರಾಜ್ಯಕ್ಕೆ ಅಂಗವಿಕಲ ವಿದ್ಯಾರ್ಥಿಗಳ ಪೈಕಿ ರ್ಯಾಂಕ್ ಗಳಿಸಿದ. ಇದಕ್ಕಾಗಿ ಅಂದಿನ ರಾಜ್ಯಪಾಲ ಟಿ. ಎನ್.ಚತುರ್ವೇದಿ ಅವರು ಮಲ್ಲಪ್ಪನಿಗೆ ಸನ್ಮಾನ ಮಾಡಿದ್ದಾರೆ.

ಪಿಯುಸಿ ಅಧ್ಯಯನವನ್ನು ಕೆ.ಎಲ್.ಇ ಸಂಸ್ಥೆಯ ಶ್ರೀ ಕಾಡಶಿದ್ದೇಶ್ವರ ಕಲಾ ಮಹಾವಿದ್ಯಾಲಯ ಹುಬ್ಬಳ್ಳಿಯಲ್ಲಿ ಪ್ರಾರಂಭಿಸಿದ.ಅನೇಕ ಸಂಸ್ಕತಿಕ ಚಟುವಟಿಕೆಗಳಲ್ಲಿ, ಭಾಷಣಗಳಲ್ಲಿ ಭಾಗವಹಿಸಿದ ಇವನು ಅಲ್ಲಿಯೂ ತನ್ನ ಪದಕದ ಬೇಟೆ ಮುಂದುವರಿಸಿದ. ದ್ವಿತೀಯ ಪಿಯುಸಿಯಲ್ಲಿ 89.16% ಅಂಕ ಪಡೆಯುವುದರ ಮೂಲಕ ಮತ್ತೆ ರ್ಯಾಂಕ್ ಪಟ್ಟವನ್ನು ತನ್ನದಾಗಿಸಿಕೊಂಡು, ಧೀರೂಬಾಯಿ ಅಂಬಾನಿ ಫೆಡರೇಶನ್‌ನಿಂದ ವಿದ್ಯಾರ್ಥಿವೇತನ ಪಡೆದಿದ್ದಾನೆ.

ನಂತರ ಅದೇ ಶಿಕ್ಷಣ ಸಂಸ್ಥೆಯಲ್ಲಿ ತನ್ನ ಬಿ.ಎ ಪದವಿಯನ್ನು ಮುಂದುವರೆಸಿದ. ಅಲ್ಲಿಯೂ ಈ ಅಂಧ ವಿದ್ಯಾರ್ಥಿ ಬಿ.ಎ. ಪ್ರಥಮ ಹಾಗೂ ದ್ವಿತೀಯ ವರ್ಷದಲ್ಲಿ ರ್ಯಾಂಕ್ ಬಂದು ಡಾ.ಡಿ.ಸಿ. ಪಾವಟೆ ರ್ಯಾಂಗ್ಲರ್ ವಿದ್ಯಾರ್ಥಿವೇತನ ಗೌರವವನ್ನು ಗಳಿಸಿದ.ಅಲ್ಲದೆ ರಾಷ್ಟ್ರೀಯ ಅಂಧರ ಫೆಡರೇಷನ್‌ನಿಂದ ಪ್ರತಿಭಾನ್ವಿತ ವಿದ್ಯಾರ್ಥಿ ಎಂಬ ಗೌರವಕ್ಕೂ ಪಾತ್ರನಾಗಿದ್ದಾನೆ.

ಕವಿವಿ ಪ್ರಕಟಿಸಿರುವ ರ್ಯಾಂಕ್ ಪಟ್ಟಿಯಲ್ಲಿ ಬಿಎ ಪದವಿಯಲ್ಲಿ 91.16% ರಷ್ಟು ಫಲಿತಾಂಶ ಪಡೆದು ಸ್ವರ್ಣ ತಿಲಕ ವಿದ್ಯಾರ್ಥಿಯಾದ.ಅದೂ ಸಾಮಾನ್ಯರನ್ನ ಅಂದ್ರೆ ಕಣ್ಣಿದ್ದವರನ್ನ ಮೀರಿಸಿ ಈ ಸಾಧನೆಗೈದಿರುವುದು ಹೆಮ್ಮೆಯ ವಿಚಾರ. ಈತನ ಸಾಧನೆಯ ಹಿಂದೆ ರಾಜ್ಯದ ಅನೇಕ ಸಂಘ ಸಂಸ್ಥೆಗಳು ಆರ್ಥಿಕ ಸಹಾಯ ಮಾಡುತ್ತಾ ಬೆನ್ನೆಲುಬಾಗಿ ನಿಂತಿದ್ದಾರೆ.ಈ ವಿದ್ಯಾರ್ಥಿಗೆ ವೆಂಕೋಬರಾವ್ ಶಿಂಧೆ ಬ್ರದರ್ಸ್‌ ಎನ್ನುವ ಉದ್ಯಮಿಗಳು ಶಿಕ್ಷಣಕ್ಕೆ ಬೇಕಾಗುವ ಹಣವನ್ನು ನೀಡುತ್ತಿದ್ದಾರೆ.ವಿಪರ್ಯಾಸ ಎಂದರೆ ಈ ವಿದ್ಯಾರ್ಥಿಯನ್ನು ಅವರು ಒಮ್ಮೆಯೂ ನೋಡಿಲ್ಲ.

ಇಂತಹ ಮಹತ್ತರ ಸಾಧನೆ ಮಾಡಲು ಸ್ಫೂರ್ತಿ ಯಾರು ಅಂತಾ ಕೇಳಿದರೆ ‘ಈ ನನ್ನ ಎಲ್ಲ ಸಾಧನೆಯ ಫಲ, ಸ್ನೇಹಿತರಿಗೆ ಹಾಗೂ ವಿದ್ಯಾಗುರುಗಳಿಗೆ ಸಲ್ಲಬೇಕು. ಜೀವನದಲ್ಲಿ ನಾ ಎಂದೂ ಇವರನ್ನು ಮರೆಯುವುದಿಲ್ಲ. ನಮ್ಮ ಮನೆಯಲ್ಲಿ ಉನ್ನತ ಶಿಕ್ಷಣವನ್ನು ಕಲಿಯುತ್ತಿರುವವನು ನಾನೇ ಮೊದಲಿಗ. ಉನ್ನತ ಶಿಕ್ಷಣ ಎಂದರೇನೆ ಗೊತ್ತಿಲ್ಲದ ನಮ್ಮವರು ಖುಷಿಯಿಂದ ಓದಿಸುತ್ತಿದ್ದಾರೆ. ಮುಂದೆ ಪ್ರೊಫೆಸರ್ ಆಗುವ ಕನಸನ್ನು ಹೊಂದಿರುವ ಈ ಪ್ರತಿಭೆಗೆ ತಾನು ಕಂಡಿರುವ ಕನಸು ಸಾಕಾರಗೊಳ್ಳಲಿ ಎನ್ನುವುದೇ ನಮ್ಮೆಲ್ಲರ ಆಶಯ. ನೀವೂ ಅಭಿನಂದನೆ ಹೇಳಬಯಸುವುದಾದರೆ:   96200 09728

thanx to prajavani...

No comments:

Post a Comment